ಚೇಂಬರ್ಲಿನ್, (ಜೋಸೆಫ್) ಆಸ್ಟಿನ್
1863-1937. ಬ್ರಿಟನ್ನಿನ ರಾಜಕಾರಣಿ. 1863 ಅಕ್ಟೋಬರ್ 16ರಂದು ಬರ್ಮಿಂಗ್ ಹ್ಯಾಮ್‍ನಲ್ಲಿ ಜನಿಸಿದ. ತಂದೆ ಜೋಸೆಫ್ ಚೇಂಬರ್ಲಿನ್, ತಾಯಿ ಹ್ಯಾರಿಯೆಟ್ ಕೆನ್ರಿಕ್, ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲೂ ಪ್ಯಾರಿಸ್, ಬರ್ಲಿನ್‍ಗಳಲ್ಲೂ ವಿದ್ಯಾಭ್ಯಾಸ ಮಾಡಿದ. ತನ್ನ ತಂದೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಚೇಂಬರ್ಲಿನ್ 1892ರಲ್ಲಿ ಸಂಸತ್ತಿನ ಸದಸ್ಯನಾಗಿ ಚುನಾಯಿತನಾಗಿ ಜೀವನಪರ್ಯಂತ ಆ ಸ್ಥಾನವನ್ನು ಉಳಿಸಿಕೊಂಡಿದ್ದ. 1895-1900ರಲ್ಲಿ ನೌಕಾಪಡೆಯ ನಾಗರಿಕ ಅಧಿಕಾರಿಯಾಗಿಯೂ 1900-02ರಲ್ಲಿ ಖಜಾನೆಯ ಹಣಕಾಸು ಕಾರ್ಯದರ್ಶಿಯಾಗಿಯೂ 1902ರಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿದ. ಆಗ ಅವನ ತಂದೆ ವಸಾಹತು ಕಾರ್ಯದರ್ಶಿಯಾಗಿದ್ದ. 1903ರಲ್ಲಿ ತಂದೆ ಜೋಸೆಫ್ ಚೇಂಬರ್ಲಿನ್ ಸರ್ಕಾರಕ್ಕೆ ರಾಜೀನಾಮೆ ಕೊಟ್ಟನಾದರೂ ಆಸ್ಟಿನ್ ಚೇಂಬರ್ಲಿನ್ ತಂದೆಯ ಒಪ್ಪಿಗೆಯೊಡನೆ ಸರ್ಕಾರದಲ್ಲಿ ಮುಂದುವರಿದ. 1903-05ರಲ್ಲಿ ಚಾನ್ಸೆಲರ್ ಆಫ್ ದಿ ಎಕ್ಸೆಚೆಕರ್ ಆಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ.

1915ರ ಮೇ ತಿಂಗಳಿನಲ್ಲಿ ಅಸ್ಕ್ವಿತನ ಸರ್ಕಾರದಲ್ಲಿ ಅವನಿಗೆ ಭಾರತದ ಸ್ಟೇಟ್ ಸೆಕ್ರಟರಿಯ ಸ್ಥಾನ ಲಭಿಸಿತು. ಲಾಯ್ಡ್ ಚಾರ್ಜನ ಸರ್ಕಾರದಲ್ಲೂ ಅವನು ಆ ಸ್ಥಾನದಲ್ಲಿ ಮುಂದುವರಿದನಾದರೂ 1917ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಮೆಸೊಪೋಟೇಮಿಯ ಕದನದಲ್ಲಿ (1917) ಸಾಕಷ್ಟು ಔಷಧ ಮತ್ತಿತರ ಸರಬರಾಯಿಯಲ್ಲಿ ಅವನ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿಲ್ಲವೆಂಬುದು ಅಪವಾದ. 1918ರಲ್ಲಿ ಅವನು ಮತ್ತೆ ಸರ್ಕಾರ ಪ್ರವೇಶಿಸಿದ. ಮತ್ತೆ ಅವನಿಗೆ ಚಾನ್ಸೆಲರ್ ಆಫ್ ದಿ ಎಕ್ಸ್‍ಚೆಕರ್ ಸ್ಥಾನ ಪ್ರಾಪ್ತವಾಯಿತು (1919). 1921ರಲ್ಲಿ ಕನ್ಸರ್ವೆಟಿವ್ ಪಕ್ಷದ ನಾಯಕನಾಗಿ ಆಯ್ಕೆ ಹೊಂದಿದ. 1922-24ರಲ್ಲಿ ಅವನು ಸರ್ಕಾರದಿಂದ ಹೊರಗಿದ್ದು 1924ರಲ್ಲಿ ಬಾಲ್ಡ್‍ವಿನ್ ಮತ್ತೆ ಸರ್ಕಾರ ರಚಿಸಿದಾಗ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ.

1925ರ ಲೋಕಾರ್ನೊ ಒಪ್ಪಂದ ಚೇಂಬರ್ಲಿನನ ಮಹತ್ತ್ವದ ಸಾಧನೆಯೆಂದು ಹೇಳಲಾಗಿದೆ. ಜರ್ಮನಿಯ ಪಶ್ಚಿಮ ಎಲ್ಲೆಗಳಿಗೆ ಭರವಸೆ ನೀಡುವ, ರಾಷ್ಟ್ರಗಳ ಕೂಟಕ್ಕೆ ಜರ್ಮನಿಯ ಪ್ರವೇಶ ದೊರಕಿಸಿಕೊಂಡ ಒಪ್ಪಂದವದು. ಶಾಂತಿ ಸ್ಥಾಪನೆಗೆ ಲೋಕಾರ್ನೊ ಮನೋಭಾವ ಸಾಧಕವಾಗಿದೆಯೆಂದು ಆಗ ನಂಬಲಾಗಿತ್ತು. 1925ರಲ್ಲಿ ಅವನಿಗೆ ನೈಟ್ ಪದವಿಯೂ ಚಾಲ್ರ್ಸ್ ಡಸ್ ಒಂದಿಗೆ ನೊಬೆಲ್ ಶಾಂತಿ ಪಾರಿತೋಷಕವೂ ದೊರಕಿದುವು. ಆದರೆ ಅನಂತರ (1927-28) ಒಂದಾದಮೇಲೊಂದರಂತೆ ನಡೆದ ಘಟನೆಗಳು ಅವನ ಜನಪ್ರಿಯತೆಯನ್ನು ಕುಗ್ಗಿಸಿದುವು. ಸೋವಿಯತ್ ದೇಶದೊಡನೆ ರಾಜತಾಂತ್ರಿಕ ಸಂಬಂಧ ಭಂಗ, ನೌಕಾ ಶಸ್ತ್ರ ಸಂನ್ಯಾಸದ ಬಗ್ಗೆ ಜಿನೀವ ಸಮ್ಮೇಳನದ ವೈಫಲ್ಯ, ಶಸ್ತ್ರ ಸಂನ್ಯಾಸದ ಬಗ್ಗೆ ಅನಾವಶ್ಯಕವಾಗಿ ರಹಸ್ಯವಾಗಿ ನಡೆದ ಆಂಗ್ಲೊ-ಫ್ರೆಂಚ್ ಸಂಧಾನ, ಚೀನ-ಈಜಿಪ್ಟ್‍ಗಳೊಂದಿಗೆ ಅವನ ವ್ಯವಹಾರ-ಇವು ಅಂಥ ಕೆಲವು ಘಟನೆಗಳು. 1931ರ ಆಗಸ್ಟ್ ತಿಂಗಳಲ್ಲಿ ರ್ಯಾಮ್ಸೆ ಮ್ಯಾಕ್ಸಡೊನಾಲ್ಡನ ಮಂತ್ರಿ ಮಂಡಲದಲ್ಲಿ ಚೇಂಬರ್ಲಿನ್ ನೌಕಾ ಸೇನೆಯ ಪ್ರಥಮ ಲಾರ್ಡ್ ಆಗಿದ್ದ 1931ರ ಅಕ್ಟೋಬರ್‍ನಲ್ಲಿ ನಡೆದ ಮಹಾಚುನಾವಣೆಗಳ ಅನಂತರ ಅವನಿಗೆ ಯಾವ ಅಧಿಕಾರವೂ ದೊರಕಲಿಲ್ಲ. ಡೌನ್ ದಿ ಇಯರ್ಸ್ (1938) ಇವು ಚೇಂಬರ್ಲಿನ್ ಬರೆದ ಆತ್ಮವೃತ್ತಗಳು.
(ಎಸ್.ಎಸ್.ಇ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ